ಡೀಲ್ಸ್, ಆಟೋ ಪಾಲ್ ಹರ್ಮನ್
	1876-1954. ಜರ್ಮನಿಯ ರಸಾಯನ ವಿe್ಞÁನಿ. ಡೈಯಿಲ್ ಎಂಬ ಕಾರ್ಬನಿಕ ಸಂಯುಕ್ತದ ಸಂಶ್ಲೇಷಣಾ ವಿಧಾನವನ್ನು ರೂಪಿಸಿದ್ದಕ್ಕಾಗಿ ಈತನಿಗೂ ಇವನ ಶಿಷ್ಯ ಆಲ್ಡರ್ ಕರ್ಟ್ ಎಂಬಾತನಿಗೂ 1950ರ ನೊಬೆಲ್ ಪಾರಿತೋಷಿಕವನ್ನು ಹಂಚಿ ಕೊಡಲಾಯಿತು. ಡೀಲ್ಸ್ ಜನಿಸಿದ್ದು ಜರ್ಮನಿಯ ಹ್ಯಾಮ್‍ಬರ್ಗಿನಲ್ಲಿ (23-1-1876). ಈತನ ತಂದೆ ಹರ್ಮನ್ ಬರ್ಲಿನ್ ವಿಶ್ವವಿದ್ಯಾಲಯದ ಫಿಲಾಲಜಿ ಪ್ರಾಧ್ಯಾಪಕ. ತಾಯಿ ಬೆರ್ತ ಡ್ಯೂಬೆಲ್-ಜಿಲ್ಲಾ ನ್ಯಾಯಾಧೀಶರೊಬ್ಬರ ಮಗಳು. ಡೀಲ್ಸ್ ಚಿಕ್ಕವನಿದ್ದಾಗಿನಿಂದಲೇ ಅತಿ ಚೂಟಿಯೂ ಸೂಕ್ಷ್ಮಮತಿಯೂ ಆಗಿದ್ದ. ವಿದ್ಯಾರ್ಥಿ ದೆಶೆಯಲ್ಲಿ ಈತ ತನ್ನ ಸಹೋದರ ಲುಡ್‍ವಿಗ್‍ನ ಜೊತೆಯಲ್ಲಿ ಬಲು ಆಸಕ್ತಿಯಿಂದ ರಾಸಾಯನಿಕ ಪ್ರಯೋಗಗಳನ್ನು ನಡೆಸುತ್ತಿದ್ದುದುಂಟು.

	1895 ರಿಂದ 1899ರ ವರೆಗೆ ಬರ್ಲಿನ್ನಿನಲ್ಲಿ ಈತ ರಸಾಯನಶಾಸ್ತ್ರವನ್ನು ವ್ಯಾಸಂಗಮಾಡಿ, 1899ರಲ್ಲಿ ಪಿಎಚ್.ಡಿ. ಪದವಿಯನ್ನು ಗಳಿಸಿಕೊಂಡ. ಮುಂದೆ ಎಮಿಲ್ ಫಿಷರ್ ಎಂಬ ಪ್ರಖ್ಯಾತ ವಿe್ಞÁನಿಯ ಶಿಷ್ಯನಾದ. ವ್ಯಾಸಂಗ ಮುಗಿದ ಬಳಿಕ ಎಮಿಲ್ ಫಿಷರ್‍ನ ಸಹಾಯಕನಾಗುವ ಅವಕಾಶ ಈತನಿಗೆ ಒದಗಿತು. ಈತನ ಅಧ್ಯಾಪಕ ವೃತ್ತಿ ಪ್ರಾರಂಭವಾದದ್ದು 1904ರಲ್ಲಿ. ಅನಂತರ 1913ರಲ್ಲಿ ರಾಯಲ್ ಫ್ರೀಡರಿಕ್ ವಿಲ್‍ಹೆಲ್ಮ್ ವಿಶ್ವವಿದ್ಯಾಲಯದಲ್ಲಿ (ಈಗಿನ ಹಮ್‍ಬೋಲ್ಟ್) ರಸಾಯನ ವಿಭಾಗದ ಮುಖ್ಯಸ್ಥನಾಗಿ ಇವನನ್ನು ನೇಮಿಸಲಾಯಿತು. ಅಲ್ಲೇ ಸಹಪ್ರಾಧ್ಯಾಪಕನಾಗಿ 1914ರಲ್ಲಿ ನೇಮಕಗೊಂಡ. 1916ರಲ್ಲಿ ಕೀಲ್‍ನ ಕ್ರಿಶ್ಚನ್ ಆಲ್‍ಬ್ರೆಕ್ಟ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕವೃತ್ತಿಯನ್ನು ಕೈಗೊಂಡು ನಿವೃತ್ತನಾಗುವವರೆಗೂ (1948) ಅಲ್ಲಿಯೇ ಕಾರ್ಯ ನಿರ್ವಹಿಸಿದ. ಆತ ತನ್ನ ದಿನಚರಿ ಬರೆಯುವಾಗ ಅದರಲ್ಲಿ ಚಿತ್ರಗಳನ್ನೂ ಬಿಡಿಸುತ್ತಿದ್ದನಂತೆ. ಈತ ಮಿತಭಾಷಿಯಾಗಿದ್ದರೂ ಹಾಸ್ಯಪ್ರವೃತ್ತಿಯನ್ನೂ ಬೆಳೆಸಿಕೊಂಡಿದ್ದ.

	ದುರದೃಷ್ಟವಶಾತ್ ಎರಡನೆಯ ಮಹಾಯುದ್ಧದಲ್ಲಿ ಈತನ ಇಬ್ಬರು ಗಂಡು ಮಕ್ಕಳು ಕಾಲವಾದರು. ಅಲ್ಲದೆ ಆತನ ರಾಸಾಯನಿಕ ಪ್ರಯೋಗಶಾಲೆ ಹಾಗೂ ಪುಸ್ತಕ ಭಂಡಾರಗಳೂ ವಿಮಾನದಾಳಿಗೆ ತುತ್ತಾದವು. ಇದರಿಂದ ಬೇಗುದಿಗೊಂಡ ಡೀಲ್ಸ್ 1944ರ ಸೆಪ್ಟೆಂಬರ್‍ನಲ್ಲಿ ನಿವೃತ್ತಿಹೊಂದಲು ಅರ್ಜಿ ಕಳಿಸಿದ. ಆದರೆ ವಿಶ್ವವಿದ್ಯಾನಿಲಯದ ಇವನ ಸೇವೆಯನ್ನು ಮನಗಂಡು ಇವನ ರಾಜೀನಾಮೆಯನ್ನು ತಿರಸ್ಕರಿಸಿತು. 1946ರಲ್ಲಿ ಅದೇ ವಿಶ್ವವಿದ್ಯಾನಿಲಯದ ರಸಾಯನ ವಿಭಾಗದ ನಿರ್ದೇಶಕನೂ ಆಗಿ ನೇಮಕಗೊಂಡ.

	ಡೀಲ್ಸ್‍ನ ಗುರು ಎಮಿಲ್ ಫಿಷರ್ ರಸಾಯನಶಾಸ್ತ್ರದಲ್ಲಿ ಹೊಸ ಹೊಸ ವಿಧಾನಗಳನ್ನು ರೂಪಿಸಿದ. ಅಲ್ಲಿಯವರೆಗೂ ಇದ್ದ ಸರಳ ವಿಧಾನಗಳು ಹಾಗೂ ನೇರ ವೀಕ್ಷಣಾ ರೀತಿಗಳಿಗೆ ಹೊಸ ರೂಪವನ್ನು ಆತ ಕೊಟ್ಟ. ಇವರ ಕಾಲದಲ್ಲಿ ತಾತ್ತ್ವಿಕ ರಸಾಯನಶಾಸ್ತ್ರ, ಭೌತರಾಸಾಯನಿಕ ವಿಧಾನಗಳು. ಜಟಿಲ ಪ್ರಯೋಗಗಳು ಮುಂತಾದವುಗಳಿಗೆ ಪ್ರಾಮುಖ್ಯ ಲಭಿಸಿತು.

	ಡೀಲ್ಸ್‍ನ್ ಕಾರ್ಯಕ್ಷೇತ್ರ ಕಾರ್ಬನಿಕ ರಸಾಯನವಿe್ಞÁನ. ಈತ ಬರೆದ ಪುಸ್ತಕಗಳಲ್ಲಿ ಕಾರ್ಬನಿಕ ರಸಾಯನಶಾಸ್ತ್ರದ ಪ್ರಯೋಗಗಳು ಎಂಬ ಪುಸ್ತಕ (1907) ವಿದ್ಯಾರ್ಥಿಗಳಿಂದಲೂ ಸಂಶೋಧಕರುಗಳಿಂದಲೂ ಮನ್ನಣೆ ಗಳಿಸಿದೆ. 1962ರ ಹೊತ್ತಿಗೆ ಇದು 19 ಪುನರ್ಮುದ್ರಣಗಳನ್ನು ಕಂಡಿತ್ತು. ಡೀಲ್ಸ್‍ನ ಉಪನ್ಯಾಸಗಳು ಮತ್ತು ಪ್ರಯೋಗಗಳು ಆತನ ವಿದ್ಯಾರ್ಥಿಗಳಿಗೆ ಬಹಳ ಅಚ್ಚುಮೆಚ್ಚಿನವಾಗಿದ್ದವು.

	1906ರಲ್ಲಿ ಡೀಲ್ಸ್ ಮ್ಯಾಲೊನಿಕ್ ಆಮ್ಲವನ್ನು ನಿರ್ಜಲಗೊಳಿಸಿ ಕಾರ್ಬನ್ ಸಬಾಕ್ಸೈಡ್ ಎಂಬ ಸಂಯುಕ್ತವನ್ನು ತಯಾರಿಸಿ ಅದರ ಗುಣಲಕ್ಷಣಗಳನ್ನು ಶೋಧಿಸಿದ. ಮ್ಯಾಲೊನಿಕ್ ಅನ್ ಹೆಡ್ರೈಡ್ ಎಂದೂ ಕರೆಯಲಾಗುವ ಈ ಸಂಯುಕ್ತದ ಅಣ್ವಕ ಸೂತ್ರ ಅ3ಔ2 ಅದೇ ವರ್ಷ ಇ. ಅಬ್ಡರ್‍ಹಾಲ್ಡನ್ ಎಂಬಾತನೊಂದಿಗೆ ಕೊಲೆಸ್ಟೆರಾಲ್ ರಚನೆಯ ವಿಷಯವಾಗಿಯೂ ಸಂಶೋಧನೆ ನಡೆಸಿದ. ಪಿತ್ತಾಶ್ಮರಿಯಿಂದ (ಗಾಲ್‍ಸ್ಟೋನ್) ಶುದ್ಧವಾದ ಕೊಲೆಸ್ಟೆರಾಲನ್ನು ಬೇರ್ಪಡಿಸಿ ಅದನ್ನು ಉತ್ಕರ್ಷಿಸಿದಾಗ ಆಮ್ಲೀಯ ಸಂಯುಕ್ತವೊಂದು ಲಭಿಸಿತು. ಅದನ್ನೇ ಡೀಲ್ಸ್ ಆಮ್ಲ ಎಂದು ಕರೆಯುವುದಿದೆ. ಆದರೆ ಕೊಲೆಸ್ಟೆರಾಲಿನ ರಚನೆ ಮಾತ್ರ ತಿಳಿಯಲಿಲ್ಲ. ಅದಕ್ಕಾಗಿ ಈತ ಹಲವಾರು ಪ್ರಯೋಗಗಳನ್ನು ನಡೆಸಬೇಕಾಯಿತು. ಗಂಧಕವನ್ನು ಬಳಸಿ ಕೊಲೆಸ್ಟೆರಾಲನ್ನು ನಿರ್ಜಲಗೊಳಿಸಿಸುವ ಪ್ರಯತ್ನ ಸಫಲವಾಗಲಿಲ್ಲ. ಅನಂತರ ಸೆಲೆನಿಯಮನ್ನು (Se) ಉಪಯೋಗಿಸಿ ನಡೆಸಿದ ಪ್ರಯೋಗದಲ್ಲಿ ಯಶಸ್ಸು ಸಿಕ್ಕಿತು. ಇದರಿಂದ ಕೊಲೆಸ್ಟೆರಾಲಿನ ರಚನೆಯನ್ನು ಸರಿಯಾಗಿ ನಿರ್ಧರಿಸುವುದು ಸಾಧ್ಯವಾಯಿತು (1927). ಮುಂದೆ ರಾಬರ್ಟ್ ಹಾರ್ಪರ್, ಕಾನ್ ಮತ್ತು ಲಿಯೋಪೋಲ್ಡ್ ರೂಜಿûೀಕಾ ಮುಂತಾದವರು ಈ ರಚನೆಯನ್ನು ಸ್ಥಿರಪಡಿಸಿದರು (1934).

	ಕೊಲೆಸ್ಟೆರಾಲನ್ನು ಸೆಲಿನಿಯಮ್‍ನಿಂದ ನಿರ್ಜಲಗೊಳಿಸಿದಾಗ ಉತ್ಪನ್ನವಾಗುವ ಹೊಸ ಸಂಯುಕ್ತವನ್ನು ಡೀಲ್ಸ್ ಹೈಡ್ರೊಕಾರ್ಬನ್ ಎಂದು ಕರೆಯುತ್ತಾರೆ. ಇದರ ರಾಸಾಯನಿಕ ಸೂತ್ರ ಅ18ಊ16. 1935ರಲ್ಲಿ ಡೀಲ್ಸ್ ಇದನ್ನೂ ಇದಕ್ಕೆ ಅನುಗುಣವಾದ ಸಂಶ್ಲೇಷಿತ ವಸ್ತುವನ್ನೂ ತಯಾರಿಸಿ ತನ್ನ ಪ್ರಯೋಗಾಲಯದಲ್ಲಿ ಪ್ರದರ್ಶಿಸಿದ. ಈ ಹೈಡ್ರೊಕಾರ್ಬನ್ ಸಂಯುಕ್ತ ಅನೇಕ ನೈಸರ್ಗಿಕ ಉತ್ಪನ್ನಗಳಿಗೆ ಮೂಲವಾಗಿದೆ. ಅ18ಊ16ರ ಸಂಶ್ಲೇಷಣೆ ಮತ್ತು ರಚನೆಯನ್ನು ಕುರಿತ ಡೀಲ್ಸ್‍ನ ಸಂಶೋಧನೆಗಳು ರಸಾಯನಶಾಸ್ತ್ರದಲ್ಲಿ ಬಹಳ ಪ್ರಮುಖ ಸ್ಥಾನಗಳಿಸಿವೆ.

	ಲೈಂಗಿಕ ಹಾರ್ಮೋನುಗಳು, ಗ್ಲೈ ಕೊಸೈಡುಗಳು, ಡಿ-ಜೀವಸತ್ತ್ವಗಳು, ಸರ್ಪವಿಷ, ವರ್ಣದ್ರವ್ಯ ಮೊದಲಾದವುಗಳ ರಾಸಾಯನಿಕ ರಚನೆ ಮತ್ತು ಗುಣಲಕ್ಷಣಗಳನ್ನು ತಿಳಿಯಲು ಡೀಲ್ಸ್ ಹೈಡ್ರೋಕಾರ್ಬನ್ನಿನ ಸಂಶೋಧನೆಯಿಂದ ತುಂಬ ಸಹಾಯಕವಾಗಿದೆ. 

	ಇದಕ್ಕಿಂತಲೂ ಬಹಳ ಪ್ರಮುಖವಾದ ಸಂಶೋಧನೆಯೆಂದರೆ ಡೀಲ್ಸ್ ಮತ್ತು ಆತನ ಶಿಷ್ಯ ಆಲ್ಡರ್ ಕರ್ಟ್ ಜೊತೆಗೂಡಿ ಸುಮಾರು ಇಪ್ಪತ್ತೆರಡು ವರ್ಷಗಳಷ್ಟು ದೀರ್ಘಾವಧಿಯ ಪ್ರಯೋಗಗಳನ್ನು ನಡೆಸಿ ಸಂಶೋಧಿಸಿದ ಡೈಯೀನ್ ಸಂಶ್ಲೇಷಣಾ ವಿಧಾನ: ಡೀಲ್ಸ್-ಆಲ್ಡರ್ ಪ್ರತಿಕ್ರಿಯೆ.

	1928ರಲ್ಲಿ ಡೀಲ್ಸ್ ಮತ್ತು ಆಲ್ಡರ್ ಅವರು ಮ್ಯಾಲಿಯಿಕ್ ಆನ್‍ಹೈಡ್ರೈಡ್ ಮತ್ತು ಸೈಕ್ಲೊಪೆಂಟಾಡೈಯೀನುಗಳನ್ನು ಸಂಯೋಜಿಸಲು ಪ್ರಯತ್ನಿಸಿ ಸಫಲರಾದರು. ಡೈಯೀನುಗಳು (ಇವು ಎರಡು ದ್ವಿಬಂಧಗಳನ್ನು ಹೊಂದಿರತಕ್ಕಂಥ ಇಂಗಾಲದ ಪರಮಾಣುಗಳಿಂದಾದ ಸಂಯುಕ್ತಗಳು) ಸಂಯೋಗಗೊಂಡು ಉಂಗುರ ರಚನೆಯುಳ್ಳ ಹೊಸ ಸಂಯುಕ್ತವನ್ನು ಕೊಟ್ಟವು. ಈ ಸಂಶ್ಲೇಷಣೆ ಹೆಚ್ಚು ಶ್ರಮವಿಲ್ಲದೇ ಸಾಧಾರಣ ಪ್ರಯೋಗಾಲಯದ ಉಷ್ಣತೆಯಲ್ಲೇ ಪೂರ್ಣಗೊಳ್ಳುವುದು. ಹೊಸ ಈ ಸಂಶ್ಲೇಷಣಾವಿಧಾನವನ್ನು ಪ್ರಾಯೋಗಿಕವಾಗಿ ಬಳಕೆಗೆ ತರುವುದಕ್ಕೆ ಪೂರ್ವದಲ್ಲಿ ಡೀಲ್ಸ್ ಇದರ ಬಗ್ಗೆ 33 ಪ್ರೌಢ ಪ್ರಬಂಧಗಳನ್ನು (ಪೇಪರ್ಸ್) ಪ್ರಕಟಿಸಿದ್ದ. ಡೈಯೀನ್ ಸಂಶ್ಲೇಷಣೆ ಕಾರ್ಬನಿಕ ರಸಾಯನ ವಿe್ಞÁನದಲ್ಲಿ ಹೊಸ ಅಧ್ಯಾಯವನ್ನೇ ಪ್ರಾರಂಭಿಸಿತು. 1904ರಲ್ಲಿ ಸೇಂಟ್ ಲೂಯಿಯಲ್ಲಿ ನಡೆದ ಲೂಸಿಯಾನ ಪರ್ಚೇಸ್ ಎಕ್ಸ್‍ಪೊಸಿಷನ್‍ನಲ್ಲಿ ಡೀಲ್ಸ್‍ನಿಗೆ ಸ್ವರ್ಣಪದಕ ಲಭಿಸಿತು. 1931ರಲ್ಲಿ ಜರ್ಮನಿಯ ರಸಾಯನತಜ್ಞರ ಸಂಘ ಇವರಿಗೆ ಅಡಾಲ್ಫ್ ಬೇಯರ್ ಸ್ಮಾರಕ ಪದಕ ನೀಡಿ ಗೌರವಿಸಿತು. 1946ರಲ್ಲಿ ಕ್ರಿಶ್ಚನ್ ಆಲ್‍ಬ್ರೆಕ್ಟ್ ವಿಶ್ವವಿದ್ಯಾಲಯ ಈತನಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿತು. ಈತ ಗಟಿಂಗೆನ್, ಹಾಲೆ ಮತ್ತು ಬವೇರಿಯನ್ ವಿe್ಞÁನ ಅಕಾಡೆಮಿಗಳ ಸದಸ್ಯನಾಗಿದ್ದ. ಐಸೊಪ್ರೀನ್ ಎಂಬ ಒಂದು ಸರಳ ಡೈಯೀನು ಬಹ್ವಣೀಕರಿಸಿದಾಗ ಕೃತಕರಬ್ಬರನ್ನು ಕೊಡುವುದು. ಪ್ಲಾಸ್ಟಿಕ್‍ಗಳ ತಯಾರಿಕೆಯಲ್ಲಿಯೂ ಡೈಯೀನ್ ಸಂಶ್ಲೇಷಣೆ ಬಹಳ ನೆರವಿಗೆ ಬಂದಿದೆ.

	ಮರಣ 7-3-1954 ರಂದು.							     (ಎಸ್.ವಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ